Wednesday, 13 April 2016


ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು

 

ಸೌರಮಾನ ಯುಗಾದಿ ಆಚರಿಸುವುದು ಮೇಷ ಮಾಸದ ಮೊದಲದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಚೈತ್ರ ವೈಶಾಖ ವಸಂತಋತು ಅಂತ ನಾವು ಬಾಲ್ಯದಲ್ಲಿ ಕಲಿತದ್ದು ನೆನಪಗಿರಬೇಕಲ್ಲಾ...ಬೇಸಗೆಯ ರಜೆ, ಮಾವು, ಹಲಸು,ಗೇರು, ಅಜ್ಜನ ಮನೆ...ನೆನಪುಗಳ ಮೆರವಣಿಗೆ ಸಾಗಿ ಬಂದಿರಲೇಬೇಕು.

ನಾನು ತುಳುನಾಡಿನವಳು. ನಮ್ಮದು ಸೌರಮಾನ ಯುಗಾದಿ ಆಚರಣೆ. ಅಂದರೆ ನಮಗೆ ನಾಳೆ ಹೊಸ ವರ್ಷ . ಅದನ್ನು ನಾವು ವಿಷು ಹಬ್ಬಎಂದು ಆಚರಿಸುತ್ತೇವೆ. ಪ್ರತಿ ವರ್ಷ ಏಪ್ರಿಲ್ ೧೪ ರಂದು ಇದು ಸಂಭವಿಸುತ್ತದೆ.

ತುಳುನಾಡು ಮಾತ್ರ ಅಲ್ಲ, ತಮಿಳು ನಾಡು, ಕೇರಳ, ಪಂಜಾಬ್, ಬಂಗಾಳ, ಅಸ್ಸಾಂ ರಾಜ್ಯಗಳಲ್ಲೂ ಇಂದಿನ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ತುಳುವರಿಗೆ-ಬಿಸುಪರ್ಬ, ಮಲೆಯಾಳಿಗಳಿಗೆ-ವಿಷು, ತಮಿಳರಿಗೆ-ಪುತ್ತಾಂಡ್, ಪಂಜಾಬಿಗಳಿಗೆ-ಬೈಸಾಕಿ, ಅಸ್ಸಾಮಿಗಳಿಗೆ-ಬಿಹು. ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ.


ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ದಿನವೇ ಬಿಸು ಪರ್ಬ’. ಈಹಬ್ಬದಲ್ಲಿ ಬಿಸುಕಣಿಗೆ ತುಂಬಾ ಮಹತ್ವ. ಬಿಸುಕಣಿ ಅಂದರೆ ಹೊಸವರ್ಷದ ಸ್ವಾಗತಕ್ಕೆ ಇಡುವ ಕಳಶ. ಬಿಸುವಿನ ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.

ದೇವರ ಮುಂದೆ ದೊಡ್ಡ ಹರಿವಾಣದಲ್ಲಿಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮಧ್ಯೆ ಸುಲಿಯದ ತೆಂಗಿನಕಾಯಿಯನ್ನು ಇಡುತ್ತಾರೆ. ಅದರ ಸುತ್ತ ಆ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಹೊಸ ಫಲ ವಸ್ತುಗಳನ್ನು ಜೋಡಿಸಬೇಕು. ಮುಖ್ಯವಾಗಿ ಮುಳ್ಳುಸೌತೆ, ಮಾವು, ಗೇರು, ಹಲಸು, ಸಿಹಿಕುಂಬಳಕಾಯಿ, ಒಡ್ಡುಸೌತೆ[ಮಂಗಳೂರು ಸೌತೆ], ಬೆಂಡೆ, ತೊಂಡೆ, ಅಲಸಂಡೆ ಮುಂತಾದವುಗಳನ್ನಿಟ್ಟು ನಡುವೆ ಒಂದು ಕನ್ನಡಿಯನ್ನಿಡಬೇಕು. ಕೆಲವೆಡೆ ಇವುಗಳ ಜೊತೆ ಬಂಗಾರದ ಆಭರಣಗಳು ಹಾಗು ಹೊಸಬಟ್ಟೆಗಳನ್ನೂ ಕಣಿಯ ಮುಂದಿಡುತ್ತಾರೆ.

ಬಿಸು ಹಬ್ಬದಲ್ಲಿ ಕಣಿಯ ದರ್ಶನ ಪಡೆಯುವುದು ಬಹಳ ಮುಖ್ಯವಾದುದು. ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಕಣ್ಣು ತೆರೆಯದೆ ಹಾಗೆಯೇ ಕಣ್ಣ್ಮುಚ್ಚಿಕೊಂಡೇ ದೇವರ ಮುಂದೆ ಬಂದು ವಿಷುಕಣಿಯ ದರ್ಶನ ಪಡೆಯಬೇಕು. ಅನಂತರವೇ ಎಣ್ಣೆ ಅಭ್ಯಂಜನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲಿಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಮಧ್ಯಾಹ್ನ ಹಬ್ಬದೂಟ ಉಂಡು ಸಂಜೆ ಸಮೀಪದ ದೇವಸ್ಥಾನ ಅಥವಾ ಭೂತಸ್ಥಾನಕ್ಕೆ ಹೋಗಿ ದೇವರ ಅಥವಾ ದೈವದ ದರ್ಶನ ಪಡೆಯಬೇಕು.

ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು. ವಸಂತ ಋತು ನಿಮ್ಮೆಲ್ಲರ ಬಾಳಿನಲ್ಲಿಯೂ ಸದಾ ಕಾಲ ನಳನಳಿಸುತ್ತಿರಲಿ.



ಕೃಪೆ: ಗೂಗಲ್