ಇಂದು ವಿಶ್ವ ಜಲ ದಿನ...
ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮಾನವನಿರಬಹುದು, ಇತರೆ ಪ್ರಾಣಿ ಪಕ್ಷಿಗಳಿರಬಹುದು,ಇಲ್ಲವೇ ಸಸ್ಯ ಸಂಕುಲವಿರಬಹು ಇವೆಲ್ಲವುದಕ್ಕೂ ನೀರು ಅತ್ಯಮೂಲ್ಯ. ವರ್ತಮಾನದಲ್ಲಿ ಸಂಶೋಧನೆಗಳು ಹೇಳಿರುವಂತೆ ಈ "ಕ್ಷೀರಪಥ ತಾರಾಗಣ"ದಲ್ಲಿ ಭೂಮಿಮಾತ್ರ ಮಾನವ ವಾಸಯೋಗ್ಯ ತಾಣ ಮತ್ತು ಶುದ್ಧ ಸಿಹಿನೀರು ಸಿಗುವ ಏಕೈಕ ಗ್ರಹ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯತೆಚ್ಚವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ದುರ್ವಿನಿಯೋಗ ಮಾಡುತ್ತಿದ್ದೇವೆ.
ಇದೆಲ್ಲವುದರ ಅರಿವುಗಳ ನಡುವೆ, ಮತ್ತದೇ ಗೊಣಗಾಟಗಳ ನಡುವೆ, ಇನ್ನೊಂದು "ವಿಶ್ವ ಜಲ ದಿನ" ಸದ್ದಿಲ್ಲದೇ ಆಗಮಿಸಿ, ಸರಿದು ಹೋಗುತ್ತಿದೆ. ಹೌದು ಇಂದು ಮಾರ್ಚ್ ೨೨ "ವಿಶ್ವ ಜಲ ದಿನ". ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಇದರ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರೀಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರೀಕನಾಗಿ "ಜಲ ಸಂಪತ್ತನ್ನು ಉಳಿಸಲು" ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ.
ಜಗತ್ತಿನ ದೊಡ್ಡಣ್ಣ ಭಯೋತ್ಪಾದನೆ ನಿರ್ಮೂಲನೆಯ ಹೆಸರಲ್ಲಿ, ಸ್ವಾರ್ಥ ಸಾಧನೆಗಾಗಿ , ತೈಲ ನಿಕ್ಷೇಪಗಳನ್ನು ಕೊಳ್ಳೆ ಹೊಡೆಯಲು, ಮಹಾಯುದ್ದಗಳನ್ನು , ಭೀಕರ ಕಾದಾಟಗಳನ್ನು ನಡೆಸಿದಂತೆ, ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು.ಅಂತ:ದಿನಗಳು ಬರುವಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?...
ಕೃಪೆ : ಬಲ್ಲ ಮೂಲಗಳಿಂದ
No comments:
Post a Comment