Saturday 5 September 2015

ಶಿಕ್ಷಕರ ದಿನಾಚರಣೆಯ ಶುಭಾಶಯಗಳು


|| ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ||


           ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ.  ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಹಂಚುತ್ತಾ, ಯುವ ಮನಸ್ಸುಗಳನ್ನು ಹೊಸ ಸವಾಲುಗಳಿಗೆ ಸನ್ನದ್ಧಗೊಳಿಸುವಲ್ಲಿ ಕಾಣಿಕೆ ನೀಡುವ ಶಿಕ್ಷಕರ ನೆನಪಿನಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯ ಆಚರಣೆ ನಡೆಯುತ್ತದೆ.
          ಭಾರತದಲ್ಲಿ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಹುಟ್ಟಿದ ದಿನ ಅದು. ರಾಧಾಕೃಷ್ಣನ್‌ ಹುಟ್ಟಿದ್ದು 1888ರಲ್ಲಿ, ತಮಿಳುನಾಡಿನ ತಿರುತ್ತಾನಿಯಲ್ಲಿ. ಮದ್ರಾಸ್‌ನ ಕಾಲೇಜೊಂದರಲ್ಲಿ ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರದಲ್ಲಿ ಪದವಿ ಪಡೆದ ಅವರು ಅದೇ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೋಧಕರಾದರು. ಗಂಟೆಗಟ್ಟಲೆ ವಿದ್ಯಾರ್ಥಿಗಳು ತನ್ಮಯರಾಗಿ ಪಾಠ ಕೇಳುವಂತೆ ಮಾಡುವ ವಾಕ್ಚಾತುರ್ಯ ಅವರಿಗೆ ಇತ್ತು.
          ಭಾರತೀಯ ಹಾಗೂ ಪಾಶ್ಚಿಮಾತ್ಯ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಂಗ್ಲಿಷ್‌ ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡರು. 1923ರಲ್ಲಿ ಅವರ ಇಂಡಿಯನ್‌ ಫಿಲಾಸಫಿಕೃತಿ ಪ್ರಕಟವಾಯಿತು. ಮಹತ್ವದ ಸಾಹಿತ್ಯ ಕೃತಿ ಎಂದು ಅದನ್ನು ಪರಿಗಣಿಸಲಾಯಿತು. ಆಮೇಲೆ ಅವರನ್ನು ಆಕ್ಸ್‌ಫರ್ಡ್‌, ಯಾಲೆ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಫಿಲಾಸಫಿ ಕುರಿತು ಪಾಠ ಹೇಳಲು ಆಹ್ವಾನ ಬಂದಿತು. ಆಂಧ್ರ ಹಾಗೂ ಬನಾರಸ್‌ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ನೇಮಕಗೊಂಡರು. 1949ರಲ್ಲಿ ರಷ್ಯಾಗೆ ಭಾರತದ ದೂತರನ್ನಾಗಿ ಕಳುಹಿಸಲಾಯಿತು. ಆಮೇಲೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. 1954ರಲ್ಲಿ ಅವರಿಗೆ ಭಾರತರತ್ನ ಗೌರವ ಸಂದಿತು. 1975ರಲ್ಲಿ ನಿಧನರಾದರೂ ಅವರ ಸೇವೆಯನ್ನು ಈಗಲೂ ಪ್ರತಿವರ್ಷ ಸ್ಮರಿಸಲಾಗುತ್ತದೆ.
          ವಿದ್ಯಾದಾನ  ಮಾಡುವ ಸರ್ವಶ್ರೇಷ್ಠವಾದ ವೃತ್ತಿ ಶಿಕ್ಷಕವೃತ್ತಿ . ನಾ ಮೇಲೊ ನೀ ಮೇಲೊ ಎಂದು ಬದುಕುವ ಇಂದಿನ ಪೀಳಿಗೆ ಗುರು ಇಲ್ಲದೆ ಬೇಕಾದುದನ್ನು ಸಾದಿಸಬಹುದ ಎಂದು ನಂಬಿದವರಿದ್ದಾರೆ. ಹಠ, ಛಲ, ಆಸೆಯಿಂದ ಸಾಧನೆ ಸಾಧ್ಯ. ಆದರೆ ಮೌಲ್ಯಯುತವಾದ, ಮಾನವೀಯತೆಯ, ತೃಪ್ತಿಕರವಾದ, ವ್ಯಕ್ತಿತ್ವ ರೂಪಗೊಳ್ಳಲು ಗುರುವಿನ ಸಾಕ್ಷಾತ್ಕಾರ ಅಗತ್ಯ. ಸಮಾಜ ನೀರಿನಂತೆ , ಗುರು ನೀರನ್ನು ನೋಡುವ ವ್ಯಕ್ತಿಯಾದರೆ ಅದರ ಪ್ರತಿಬಿಂಬವೇ ಶಿಷ್ಯ. ಗುರುವೃಂದಕ್ಕೆ ನಮನ.

No comments: