|| ಭಾಂದವ್ಯ ಬೆಸೆಯುವ
ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ ||
ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು
ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ
ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ
ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ
ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.
ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ
ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್
ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ. ದೇಶದ ವಿವಿಧೆಡೆಗಳಲ್ಲಿ
ವಿಜೃಂಭಣೆಯಿಂದ ನಡೆಯುವ ಚೌತಿ ಹಬ್ಬವು ಇಂದು ಬಹುತೇಕ ’ಸಾರ್ವಜನಿಕ ಗಣೇಶೋತ್ಸವ’
ಗಳೊಂದಿಗೆ ಸೇರಿಹೋಗಿದೆ. ಯಾಕೆಂದರೆ
ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘಗಳ ಕಾರ್ಯಚಟುವಟಿಕೆ ಆ ರೀತಿ ಇದೆ. ಕರಾವಳಿ
ಕರ್ನಾಟಕದಲ್ಲಂತೂ ’ಚೌತಿ’ ಎಂಬುದು "ಮನೆ ಮನೆಗಳಲ್ಲಿ ಆರಾಧನೆ’ ಎನ್ನುವುದಕ್ಕಿಂತಲೂ ’ಸಾರ್ವಜನಿಕ
ಗಣೇಶೋತ್ಸವದೊಂದಿಗೆ ಸೇರಿ ಮಾಡುವ ಆಚರಣೆ’ ಎನ್ನುವಷ್ಟರ ಮಟ್ಟಿಗಿದೆ. ಇತ್ತೀಚಿನ ವರ್ಷ ಗಳಲ್ಲಂತೂ
ಗಣೇಶೋತ್ಸವ ಸಮಿತಿಗಳ ಮೂಲಕವೇ ’ಚೌತಿ’ ನಡೆಯುವಂತಾಗಿದೆ.
ಈಗ ಒಂದು, ಮೂರು, ಐದು, ಏಳು... ಹೀಗೆ ನಿಗದಿತ ದಿನಗಳವರೆಗೆ ಸಾರ್ವಜನಿಕವಾಗಿ ಗಣೇಶನ
ಮೂರ್ತಿಯನ್ನು ನಿರ್ದಿಷ್ಟ ಸ್ಥಳದಲ್ಲಿಟ್ಟು
ಅದನ್ನು ವಿಸರ್ಜಿಸುವುದಕ್ಕೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಸೀಮಿತವಾಗುಳಿದಿಲ್ಲ.
ಧಾರ್ಮಿಕ ಕಾರ್ಯಕ್ರಮಗಳಷ್ಟೆ ಪ್ರಾಮುಖ್ಯತೆ ಸಾಂಸ್ಕೃತಿಕ,
ಸಾಮಾಜಿಕ ಕಾರ್ಯಕ್ರಮ ಗಳಿಗೂ
ಗಣೇಶೋತ್ಸವಗಳಲ್ಲಿ ದೊರೆಯುತ್ತಿದೆ ಎಂಬುದು ಉಲ್ಲೇಖನೀಯ.
ಗಣೇಶೋತ್ಸವ ಸಮಿತಿಗಳು ಒಂದು ನಿರ್ದಿಷ್ಟ ಧರ್ಮದ ಜನರನ್ನು
ಒಳಗೊಂಡಿರುವ ಸಮಿತಿಗಳಾಗಿ ಉಳಿದಿಲ್ಲ. ಅದರಲ್ಲಿ ಹಿಂದೂಯೇತರ ಧರ್ಮ ಬಾಂಧವರು ಕೂಡ ಸಕ್ರಿಯವಾಗಿ
ಗುರುತಿಸಿಕೊಂಡಿರುವುದನ್ನು ಕರಾವಳಿಯ ಈ ಭಾಗದ ಅಲ್ಲಲ್ಲಿ ನಾವು ಕಾಣುತ್ತಿದ್ದೇವೆ. ಇದು ಸಣ್ಣತನ, ಸಂಕುಚಿತ ಭಾವವನ್ನು ಮೀರಿದ
ಬೆಸುಗೆಯೇ ಸರಿ. ಸಕಲ ಬ್ಲಾಗರ್ ಗಳಿಗೆ, ಹಿತೈಷಿಗಳಿಗೆ, ಆತ್ಮೀಯರಿಗೆ ಚೌತಿ ಹಬ್ಬದ ಶುಭಾಶಯಗಳು.
ಕೃಪೆ: ಗೂಗಲ್
No comments:
Post a Comment