Sunday 7 September 2014

ಮಾವೇಲಿ ನಾಡಲ್ಲಿ ಐಶ್ವರ್ಯದ ಓಣಂ... 



ಕಳೆದು ಹೋದ ಓಣಂ ಹಬ್ಬದ ಆಹ್ಲಾದಕರ ನೆನಪುಗಳು ಮಾಸಿಹೋಗುವ ಮುನ್ನವೇ ಮಾವೇಲಿ ನಾಡಲ್ಲಿ ಮತ್ತೊಂದು ಓಣಂ ಕೇರಳೀಯರ ಮನೆ ಮನ ತುಂಬುತ್ತಿದೆ. ನಮ್ಮ ಅನುಭವಗಳ ಸಾಲಿಗೆ ಒಂದಷ್ಟು ಹೊಸ ಸಂತಸದ ಕ್ಷಣಗಳ ಸೇರ್ಪಡೆ. ಭರವಸೆಗಳ ಮೂಟೆ ಹೊತ್ತು ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ  ಒಣಗಿದ ಬಾಂಧವ್ಯಗಳನ್ನು ಚಿಗುರಿಸುತ್ತಾ ಬದುಕಿನ ಪುಟಗಳಲ್ಲಿ ಬಣ್ಣಗಳ ಅಧ್ಯಾಯವನ್ನು ಬರೆಯುತ್ತಿದೆ. ಜಾತಿ ಬೇಧಗಳ ಎಲ್ಲ ಬಂಧನಗಳನ್ನು ಒಡೆದು ಜನರು ಒಂದಮ್ಮನ ಮಕ್ಕಳಂತೆ ಓಣಂ ಆಚರಿಸುವುದನ್ನು ಕಂಡಾಗ ಈ ನಾಡಲ್ಲಿ ಹುಟ್ಟಿ ಬೆಳೆದದಕ್ಕೆ ಹೆಮ್ಮೆಯನಿಸುತ್ತಿದೆ. ಮನುಷ್ಯ ಸಹಜವಾದ ದ್ವೇಷ, ಮತ್ಸರ, ವಂಚನೆಗಳ ಎಲ್ಲೇ ಮೀರುವಾಗ ಉಂಟಾದ ಗಾಯದ ಕಲೆಯನ್ನು ಮರೆಮಾಚಿ ಮನುಷ್ಯ ಮನುಷ್ಯರ ನಡುವೆ ಐಕ್ಯತೆಯ ಸೇತುವನ್ನು ಕಟ್ಟುತಿದೆ ಓಣಂ. ಹೇಗೆ ವಿವಿಧ ಜಾತಿ, ಬಣ್ಣದ ಹೂವುಗಳ ಸಂಗಮವಾಗಿದೆಯೋ ಪೂಕಳಂ, ಹಾಗೆಯೇ ವಿವಿಧ ಜಾತಿ, ಮತಗಳ ಭೇದವಿಲ್ಲದೆ ಆಚರಿಸುವ ಹಬ್ಬವೊಂದಿದ್ದರೆ ಅದು ಓಣಂ ಮಾತ್ರ. ಮನೆಯಂಗಳದಿ ಅಚ್ಚುಕಟ್ಟಾಗಿ ಜೋಡಿಸಿದ ಹೂಗಳಂತೆ ಮಾನವೀಯ ಸಂಬಂಧಗಳನ್ನು ನಾಜೂಕಾಗಿ ಪೋಣಿಸುವ ಹಬ್ಬ ಓಣಂ. ಒಟ್ಟಿಗೆ ಕುಳಿತು ಉಣ್ಣುವ , ಸಿಹಿಯನ್ನು ಸವಿಯುವ , ಬಿಳಿ ಓಣಂ ವಸ್ತ್ರದೊಂದಿಗೆ ಪರಿಶುಧ್ಧತೆಯನ್ನು ಸಾರುವ ಹಬ್ಬ ಓಣಂ. ನಾಲ್ಕು ಸಾಲುಗಳಲ್ಲಿ ಓಣಂ...

"ದೇವರ ಸ್ವಂತ ನಾಡಿದು
ಭುವಿಯ ಸ್ವರ್ಗ ಎಂದರೆ ತಪ್ಪಾಗದು
ಮಾವೇಲಿ ಆಳಿದ ನಾಡಿದು...
ಇಲ್ಲಿ ಓಣಂ ಸಂಭ್ರಮ ಅಂದ್ರೆ ಹೀಗೆ ಸಾರ್
ಜಾತಿ ಇಲ್ಲ, ಮತ ಬೇಧ ಇಲ್ಲ
ಸಹೋದರರಂತೆ ನಾವೆಲ್ಲಾ..."

ಈ ಓಣಂ ನಮ್ಮ ಬದುಕಲ್ಲಿ ಮಾತ್ರವಲ್ಲ ನಮ್ಮಿಂದಾಗಿ ಇತರರ ಬಾಳಲ್ಲೂ ಬಣ್ಣಗಳ ಪೂಕಳಂ ಬರೆಯುವಂತಾಗಲಿ. ಸ್ನೇಹ, ಹಿತನಡೆ, ಪರಿಶ್ರಮ, ಪರೋಪಕಾರ ಮನೋಭಾವ ಇತರರಿಗೂ ಮಾದರಿಯಾಗಲಿ. ಬದುಕಲ್ಲಿ ನಾವು ಸಾಧಿಸಬೇಕಾದದ್ದು ಇದ್ದೇ ಇದೆ, ಅದೇ ಹೊತ್ತಿಗೆ ನಮ್ಮ ಕರ್ತವ್ಯಗಳನ್ನು, ಜೀವನ ಮೌಲ್ಯಗಳನ್ನು ಕಿಂಚಿತ್ತು ಅರಿತು ಬಾಳುವುದು ಉತ್ತಮ. ಒಂದಷ್ಟು ನಿರೀಕ್ಷೆಗಳನ್ನು ಹೊತ್ತು ಭೂಮಿಗೆ ಬರುವ ಮಹಾಬಲಿಗೆ ಇಲ್ಲಿನ ಜನರ ನಡುವಿನ ವಿರಸ, ವಿಮುಖತೆ ನೋಡಿ ಮುನಿಸಾಗದಿರಲಿ. ಉತ್ತಮ ಬದುಕು ಬಾಳಿದರೆ ಕೆರಳೀಯರಾದ ನಮಗೆ ವರ್ಷಕ್ಕೊಂದು ಓಣಂ ಯಾಕೆ ? ಬದಲಾಗಿ ಪ್ರತೀ ದಿನ ಓಣಂ ಆಚರಿಸಬಹುದು... ಏನಂತೀರಿ... ಎಲ್ಲರಿಗೂ ಈ ಪೋನ್ನೋಣಂ ನಗೆ, ಸಮೃದ್ಧಿ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ...


                                                                          ಪ್ರವೀಣ್ ಕುಮಾರ್ಕೆ



No comments: