Sunday 25 January 2015

66 ನೇ ಗಣರಾಜ್ಯ ದಿನಾಚರಣೆಯ ಶುಭಾಶಯಗಳು.


ಭಾರತೀಯರ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನವೊಂದು ಅರ್ಪಿತವಾಯ್ತು. ಅಂದು ಭಾರತದ ಪ್ರಜೆಗಳು ಸ್ವತಃ ತಮಗೇ ಪ್ರಭುಗಳಾದರು. ಪ್ರಜೆಗಳೇ ಪ್ರಭುಗಳಾದ 1950ರ ಜನವರಿ 26ರ ದಿನವನ್ನು ಗಣರಾಜ್ಯದಿನ ಎಂದು ಘೋಷಿಸಲಾಯಿತು.

ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ 1950, ಜನವರಿ 26ರಂದು ಅಂಗೀಕರಿಸಲ್ಪಟ್ಟಿತ್ತು.

ಭಾರತ ದೇಶದಲ್ಲಿ ಸಂವಿಧಾನ ಜಾರಿಯಲ್ಲಿ ಬಂದ ಮೇಲೆ ಪ್ರಜೆಗಳದೇ ಸರ್ಕಾರ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ತಮಗೆ ಸ್ವಾತಂತ್ರ್ಯವಿದೆ, ತಮ್ಮನ್ನಾಳುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂಬ ಸಂತಸ ಇಡೀ ದೇಶದ ಜನರಲ್ಲಿ ಪ್ರತಿಫಲಿಸಿತ್ತು. ಜನರಲ್ಲಿ ನಿಧಾನವಾಗಿ ಸಂವಿಧಾನ, ಸರಕಾರದ ಮೇಲೆ ವಿಶ್ವಾಸ ಬೆಳೆಯಲು ಪ್ರಾರಂಭವಾಯಿತು. ಸಾಲು ಸಾಲಾಗಿ ಬಂದ ಪಂಚವಾರ್ಷಿಕ ಯೋಜನೆಗಳು ನಮ್ಮ ದೇಶವನ್ನು ಅಭಿವೃದ್ಧಿಪಡಿಸುತ್ತಾ ಸಾಗಿದವು. ಸಾಕ್ಷರತೆಯ ಪ್ರಮಾಣ ಹೆಚ್ಚಾಯಿತು. ವಿದ್ಯಾವಂತರ ಸಂಖ್ಯೆಯಲ್ಲಿ ಏರಿಕೆಯಾಯ್ತು. ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಯಿತು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳು ನಡೆದವು. ನಗರಗಳೂ ಬೆಳೆದವು, ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ಬಂಡವಾಳ ಹೂಡಿದವು. ನಿಧಾನವಾಗಿ ಆಧುನಿಕತೆಯ ಸೆಳೆತಕ್ಕೆ ಭಾರತದ ಮಹಾನಗರಗಳು ಒಗ್ಗಿಕೊಂಡವು. ಜನರ ಆದಾಯದಲ್ಲಿ ಹೆಚ್ಚಳವಾಯಿತು, ಜೀವನ ಶೈಲಿಯಲ್ಲಿ ಅಭಿವೃದ್ಧಿಯಾಯಿತು. ದೇಶ ವೈಜ್ಞಾನಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪಡೆದುಕೊಂಡಿತು. ಇವೆಲ್ಲವೂ ಸಾಧ್ಯವಾಗಿದ್ದು ಪ್ರಜಾಪ್ರಭುತ್ವದಿಂದ.
ಭಾರತ ಪ್ರಜಾರಾಜ್ಯವಾಗಿ 63 ವರ್ಷಗಳಲ್ಲಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಸಾಕಷ್ಟು ಬದಲಾಗಿದೆ. ಜನರ ವಿಚಾರ, ಆಚಾರ, ನಡತೆ, ನಂಬಿಕೆಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೆಳವಣಿಗೆ ಧನಾತ್ಮಕವಾಗಿಯೂ ಆಗಿದೆ ಋಣಾತ್ಮಕವಾಗಿಯೂ ಆಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಸ್ವಾತಂತ್ರ್ಯ ಕೆಲವೊಮ್ಮೆ ಸ್ವೇಚ್ಛಾಚಾರವಾಗುತ್ತಿದೆ. ಇಂದಿನ ಭಾರತದ ಪ್ರಜೆಗಳಲ್ಲಿ ದೇಶಪ್ರೇಮ ಕುಂದಿದೆ. ಅಂದಿನ ಸ್ವಾತಂತ್ರ್ಯ ಹೋರಾಟಗಾರರಂತೆ, ದೇಶಕ್ಕಾಗಿ ತನು, ಮನ, ಧನ ಅರ್ಪಿಸುವವರು ಈಗ ಯಾರೂ ಇಲ್ಲ. ಎಲ್ಲರಿಗೂ ತಮ್ಮ ಲಾಭವೇ ಮುಖ್ಯ. ಜನನಾಯಕರು ಎಂದೆನೆಸಿಕೊಂಡವರಿಗೂ ಅವರ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಹಪಹಪಿ ಅಷ್ಟೇ.. ಅದಕ್ಕಾಗಿಯೇ ಅವರ ಸತತ ಹೋರಾಟ.. ಅಷ್ಟಕ್ಕಾಗಿಯೇ ಬೇಕು ಅವರಿಗೆ ಅಧಿಕಾರ.

ಅಧಿಕಾರ ಕೈಗೆ ಸಿಕ್ಕ ತಕ್ಷಣ ಜನರ ಹಣವನ್ನೇ ಕೊಳ್ಳೆ ಹೊಡೆಯುವ ಜನನಾಯಕರ ಕಾರ್ಯ ಜನಸಾಮಾನ್ಯರಲ್ಲಿ ರಾಜಕೀಯದ ಕಡೆಗೆ ರೇಜಿಗೆ ಹುಟ್ಟಿಸಿದೆ. ಸಣ್ಣ ಸರ್ಕಾರಿ ಕಚೇರಿಯಿಂದ ಹಿಡಿದು ಕೇಂದ್ರದ ತನಕ ನಡೆಯುತ್ತಿರುವ ಬ್ರಷ್ಟಾಚಾರವನ್ನು ನೋಡುತ್ತಿರುವ ಪ್ರಜೆಗಳು, ಪ್ರಜಾಪ್ರಭುತ್ವ ಪದ್ಧತಿಯನ್ನೇ ಹಳಿಯುವಂತಾಗಿದೆ. ಅನರ್ಹ ಅಭ್ಯರ್ಥಿಗಳು ಪ್ರಚಾರದ ಗಿಮಿಕ್‌ಗಳಿಂದ ಗೆದ್ದು ಬಂದು ಅಧಿಕಾರಕ್ಕೆ ಬಂದು ದೇಶವನ್ನೇ ಹಾಳುಗೆಡಹಿದಂತಹ ಅದೆಷ್ಟೋ ಉದಾಹರಣೆಗಳ ಜೊತೆ ಅರ್ಹ ಅಭ್ಯರ್ಥಿಯಾಗಿದ್ದ ಜನನಾಯಕರೂ ಅಧಿಕಾರದ ಆಸೆಗೆ ಬಿದ್ದು ಭ್ರಷ್ಟರಾಗಿರುವ ಉದಾಹಣೆಗಳೂ ಸಾಕಷ್ಟಿವೆ. ಇದು ಪ್ರಜಾಪ್ರಭುತ್ವ ರಾಷ್ಟ್ರದ ರಾಜಕೀಯ ಪರಿಸ್ಥಿತಿ.
ಸಾಮಾಜಿಕವಾಗಿಯೂ ಜನರು ತಪ್ಪು ದಾರಿ ಹಿಡಿಯುತ್ತಿರುವುದಕ್ಕೂ ಸ್ವಾತಂತ್ರ್ಯ ಸ್ವೇಚ್ಛೆಯಾಗಿದ್ದೇ ಕಾರಣ ಎಂಬುದು ಕೂಡ ಹಲವರ ನಿಲುವು. ನಮ್ಮ ನೆನಪಿನಿಂದ ಯಾವತ್ತೂ ಮಾಸಿ ಹೋಗದ ದೆಹಲಿಯಲ್ಲಿ 23 ವರ್ಷ ವಯಸ್ಸಿನ ಯುವತಿಯ ಮೇಲೆ ಅಮಾನವೀಯ ರೀತಿಯಲ್ಲಿ ನಡೆದ ಸಾಮೂಹಿಕ ಮಾನಭಂಗ ಪ್ರಕರಣವಂತೂ, ಭಾರತದ ಸಾಮಾಜಿಕ ಜೀವನದ ಅಧಃಪತನವನ್ನೇ ಬೊಟ್ಟು ಮಾಡಿ ತೋರಿಸಿದಂತಿದೆ. ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಅದೆಷ್ಟೋ ಅತ್ಯಾಚಾರ, ಅನಾಚಾರ, ಕೊಲೆ ಸುಲಿಗೆಯಂತಹ ಕೃತ್ಯವನ್ನು ಹತ್ತಿಕ್ಕಲು ನಮ್ಮ ಪ್ರಜಾಪ್ರಭುತ್ವ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೇ ಎಂಬ ಅನುಮಾನವೂ ಜನರ ಮನಸ್ಸಿನಲ್ಲಿ ಬಂದಿರಲೂಬಹುದು.

ದೇಶದ ಜನರ ಅಭಿವೃದ್ಧಿಗಾಗಿ, ಶಾಂತಿ ಸುವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡ ಸಮಗ್ರ ಏಳಿಗೆಗಾಗಿ ನಮ್ಮ ಹಿರಿಯರು ರಚಿಸಿದ ಸಂವಿಧಾನದಲ್ಲಿ ಈಗ ಸಾಕಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. 444 ವಿಧಿಗಳನ್ನೂ, 10 ಅನುಚ್ಛೇದಗಳನ್ನೂ, ಹೊಂದಿರುವ ಈ ಸಂವಿಧಾನ, ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಸಂವಿಧಾನವನ್ನು ಸಿದ್ಧಪಡಿಸುವಾಗ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಆ ಎಲ್ಲ ನಾಯಕರೂ ಭವ್ಯ ಭಾರತದ ಸುಂದರ ಅಭಿವೃದ್ಧಿಯ ಕನಸು ಕಂಡಿದ್ದರು. ಸಂವಿಧಾನ ಎಂಬ ಪೌಷ್ಠಿಕಾಂಶದಿಂದ ಭಾರತದ ಅಭಿವೃದ್ಧಿ ಎಂಬ ಮಗು ಮುಂದೆ ಏಳಿಗೆಯತ್ತ ಹೆಜ್ಜೆ ಹಾಕುತ್ತೆ ಎಂಬ ಕಲ್ಪನೆಯಲ್ಲಿದ್ದರು. ದೇಶದ ಸಮಗ್ರ ಏಳಿಗೆಯ ಕನಸು ಕಂಡರು. ಪುಟ್ಟ ಮಗುವಿನ ಭವಿಷ್ಯದ ಬಗ್ಗೆ ತಾಯಿ ಕಲ್ಪಿಸಿಕೊಂಡಂತೆ. ಆದರೆ ಅವರ ನಿರೀಕ್ಷೆಯ ಮಟ್ಟದಲ್ಲಿ ಇಂದಿನ ಸಮಾಜ, ದೇಶ ಅಭಿವೃದ್ಧಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ ?
ಗಣರಾಜ್ಯ ದಿನ ಎಂದರೆ ಸರಕಾರಿ ರಜೆ. ಅನ್ನುವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅರ್ಥೈಸಿಕೊಂಡಂತಿದೆ. ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯದಿನದ ಆಚರಣೆಗಳನ್ನು ಟೀವಿಯಲ್ಲಿ ನೋಡಿ ಸಂತಸ ಪಟ್ಟು, ಟಿವಿ ಕಾರ್ಯಕ್ರಮ ಮುಗಿದಾಗ ಭವ್ಯ ಭಾರತದ ಪ್ರಜೆಗಳ ಗಣರಾಜ್ಯ ದಿನದ ಆಚರಣೆಯೂ ಮುಗಿದು ಹೋಗುತ್ತದೆ.

ಎಲ್ಲ ಧಾರ್ಮಿಕ ಹಬ್ಬಗಳಂತೆ, ರಾಷ್ಟ್ರೀಯ ಹಬ್ಬಗಳೂ ರಾಷ್ಟ್ರದ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು.ದೇಶ, ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಪಡೆದುಕೊಂಡ ದೇಶ ನಮ್ಮದು. ನಮ್ಮ ಧ್ಯೇಯ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಅನುರಣಿಸುತ್ತಿರಬೇಕು.

ಸು ಸಮಾಜದ, ಸರ್ವತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಯಶಸ್ವಿ ದೇಶದ ಕನಸು ಕಂಡು, ಆ ದೇಶಕ್ಕಾಗಿ ಬೃಹತ್‌ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಆ ನಾಯಕರ, ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕು. ಆ ನಾಯಕರ ಉದ್ದೇಶವನ್ನು ನೆನಪಿಸಿಕೊಂಡು, ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗುವಂತಾಗಬೇಕೆಂಬ ಉದ್ದೇಶ ಇಂಥ ರಾಷ್ಟ್ರೀಯ ದಿನಗಳ ಆಚರಣೆಯ ಹಿಂದಿದೆ.

ಅಖಂಡ ಭಾರತದ ಕೋಟಿ ಕೋಟಿ ಪ್ರಜೆಗಳಿಗೂ ದೇಶದ ಜವಾಬ್ದಾರಿಯನ್ನು ಅಧಿಕೃತವಾಗಿ ನೀಡಿದ ಶುಭ ದಿನ ಇವತ್ತು. ಪ್ರತಿಯೊಬ್ಬ ಭಾರತೀಯನೂ ದೇಶದ ಅಭಿವೃದ್ಧಿಗೆ ಜವಾಬ್ದಾರನಾಗಿರುತ್ತಾನೆ. ಗಣರಾಜ್ಯದಿನದಂತೆ ಶುಭ ದಿನದಲ್ಲಿ ನಮ್ಮ ಎಲ್ಲ ಜವಾಬ್ಧಾರಿಗಳಿಗೂ ಬದ್ಧರಾಗಿರುತ್ತೇನೆ ಎಂಬ ಪ್ರತಿಜ್ಞೆ ಮಾಡುವುದರ ಮೂಲಕ, ಗಣರಾಜ್ಯದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು. ಆಗಲೇ ಈ ಗಣರಾಜ್ಯದಿನಕ್ಕೆ ನಿಜವಾದ ಅರ್ಥ ಬರಲು ಸಾಧ್ಯ.


ಕೃಪೆ: ಗೂಗಲ್ 

No comments: