ಮುಖವಾಡಗಳನ್ನು
ಧರಿಸಿ ಅಭಿನಯಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ... ನನ್ನ ತರಗತಿಯ ಮಕ್ಕಳ ಅಭಿನಯ ನೈಪುಣ್ಯ , ಮಿಮಿಕ್ರಿಯ ಮೂಲಕ ಇತರರನ್ನು ರಂಜಿಸುವ ಸಾಮರ್ಥ್ಯವನ್ನು ಗುರುತಿಸುವ
ಒಂದು ಸಣ್ಣ ಪ್ರಯತ್ನ ಮಾಡಿದೆಯಷ್ಟೇ... ಎಲ್ಲ ಮಕ್ಕಳೂ ಅದೆಷ್ಟು ಸೊಗಸಾಗಿ ಅಭಿನಯಿಸಿದರು
ಗೊತ್ತೇ... ಇದನ್ನ ವೀಕ್ಷಿಸಿದ ಒಂದು ಮಗುವಂತೂ ಹೆದರಿ ಓಡಿ ಹೋಗಿ ಸಮೀಪದ ತರಗತಿಯಲ್ಲಿನ ಟೀಚರ
ಸೆರಗ ಹಿಂದೆ ಅವಿತು ಕುಳಿತು ಜೋರಾಗಿ ಅತ್ತೇ ಬಿಟ್ಟ. ಬಳಿಕ ಈ ಮಕ್ಕಳೇ ಅವನನ್ನ ಸಂತೈಸಿದುದು
ಅವರ ನಿಷ್ಕಲ್ಮಶ ಮನಸ್ಸನ್ನ ಎತ್ತಿ ತೋರಿಸುವಂತಿತ್ತು. ಈ ಪುಟಾಣಿಗಳ ನಿಜವಾದ ಆಸಕ್ತಿಯನ್ನ
ಗುರುತಿಸಿ ಅದನ್ನ ಅವರಿಗೆ ನೀಡುವಲ್ಲಿ ಹಲವಾರು ಬಾರಿ ನಾವು ಎಡವಿದ್ದೇವೆಯೋ ಎಂದೆನಿಸುತ್ತಿದೆ. ಇಷ್ಟವಿಲ್ಲದಿದ್ದರೂ
ಒಂದಷ್ಟು ಹೋಂ ವರ್ಕುಗಳು, ಹೆಗಲಿಗೆ ಭಾರವಾಗುವ ಪುಸ್ತಕಗಳ ಗಂಟು, ಕಬ್ಬಿಣದ ಕಡಲೆಕಾಯಿಯಂತಿರುವ
ಗಣಿತ ಪಾಠಗಳು ಎಲ್ಲ ಮಕ್ಕಳ ಸಹಜ ಅಭಿರುಚಿಗಳನ್ನ ಮರೆ ಮಾಚಿ ಬಿಟ್ಟಿವೆ. ಬೆತ್ತ ಹಿಡಿದು ಸದಾ
ಹೊಡೆಯುವ ಹಳೆಯ ಶಿಕ್ಷಣ ವಿಧಾನಕ್ಕೆ ವಿಭಿನ್ನವಾಗಿ ಆಟದೊಂದಿಗೆ ಪಾಠ ಮಾಡಿದ ನೆಚ್ಚಿನ ಗುರುಗಳ
ಬಗ್ಗೆ ಹೃದಯದಾಳದ ಪ್ರೀತಿ ಮಕ್ಕಳಿಗೆ ಬೆಳೆಯುತ್ತದೆ. ಅಸಕ್ತಿ ಕೆರಳಿಸುವ ಆಟಗಳನ್ನು ಆಡುವುದರಿಂದ ವಿದ್ಯಾರ್ಥಿಗಳಲ್ಲಿ ಗ್ರಹಿಕೆ ಹಾಗೂ ಮನನ ಶಕ್ತಿ ಹೆಚ್ಚುವುದನ್ನು
ಶಿಕ್ಷಕರಾದ ನಾವು ತರಗತಿಯಲ್ಲಿ ಗುರುತಿಸುತ್ತಿದ್ದೇವೆ
ತಾನೇ... ಕಲಿಕೆಯ ಒತ್ತಡದಿಂದಾಗಿ ಮಕ್ಕಳ ಮನದಲ್ಲಿ ಉಂಟಾಗುವ ಆತಂಕಕಾರಿ ಭಾವನೆ ದೂರ ಮಾಡಿ ಮಕ್ಕಳೊಂದಿಗೆ ಮುಕ್ತ ವಾಗಿ ಬೆರೆತು
ಇಂತಹ ಆಟಗಳ ಮೂಲಕ ಪಾಠಗಳ ಕಡೆಗೆ ವ್ಯಾಮೋಹ ಹೆಚ್ಚುವಂತೆ ಮಾಡುವಲ್ಲಿ ನಾವು ಶಿಕ್ಷಕರು ಇನ್ನೂ ಒಂದು
ಹೆಜ್ಜೆ ಮುಂದೆ ಇಡೋಣ...
#
ಪ್ರವೀಣ್ ಕುಮಾರ್
No comments:
Post a Comment