Wednesday, 22 October 2014

 ಬಾಳಿನ ಕತ್ತಲು ಕಳೆದು ಬೆಳಕು ಮೂಡಿಸುವ ದೀಪಾವಳಿ...




            ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ.  ದೀಪ + ಅವಳಿ ಎಂದರೆ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ. ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು.ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.
        ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ,ನರಕಾಸುರನ ವಧಿಸಿಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.
ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿಬಾಣಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು. ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂಸುವರ್ಣವನ್ನೂ ಕಳಶದ ಜೊತೆ ಇಟ್ಟುಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ.  ದೀಪಾವಳಿ ಹಬ್ಬ ಹಿಂದು ಧರ್ಮದಲ್ಲೇ ಬಹುದೊಡ್ಡ  ವೈಶಿಷ್ಟ ಪೂರ್ಣವಾದ ಹಬ್ಬವಾಗಿದೆ. ಬೆಳಕಿನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ದೀಪಗಳ ಹಬ್ಬ ದೀಪಾವಳಿ ಮೂರು ದಿನಗಳ ಹಬ್ಬ. ಎಲ್ಲಿ ನೋಡಿದರೂ ದೀಪಗಳ ಸಾಲು. ಕತ್ತಲೆ ಮಾಯವಾಗಿ ಎಲ್ಲೆಲ್ಲೂ  ಬೆಳಕು ಚೆಲ್ಲಿರುತ್ತದೆ. ಈ ದೀಪಗಳನ್ನು ಬೆಳಗುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಕಾರರ ಅಭಿಮತವಾಗಿದೆ.ಯಾವ ಮನೆಯಲ್ಲಿ  ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ  ಸುಖಸಂಪತ್ತು ಸಮೃದ್ಧಿಯಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ  ದಾರಿದ್ರ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ  ದೀಪಕ್ಕೆ ವಿಶೇಷ ಮಹತ್ವವಿದೆ.
    
     ತಾನು ಉರಿದು ಲೋಕಕ್ಕೆ ಬೆಳಕು ನೀಡುವ ಪರಂಜ್ಯೋತಿಯನ್ನು ಅನುಕರಿಸುತ್ತಾ ಮನುಷ್ಯರಾದ ನಾವು ಕೂಡ ಸ್ವಾರ್ಥವನ್ನು ಮರೆತು ಜ್ಯೋತಿಯಂತೆ ಇತರರಿಗೆ ನೆರವಾಗೋಣ. ಹಾಗೆನೇ ಇನ್ನೊಂದು ವಿಚಾರ, ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವುದು ಸಾಮಾನ್ಯ. ದೀಪ ಉರಿಸಲು ಲೋಹದ ಪಿಂಗಾಣಿ ಬದಲಿಗೆ ಮಣ್ಣಿನ ಹಣತೆಗಳನ್ನು ಬಳಸಿ. ಇದರಿಂದ ಹಣತೆ ತಯಾರಿಸಿ ಜೀವನ ಸಾಗಿಸುವ ಕುಂಬಾರರಿಗೂ ಸಹಾಯವಾಗುತ್ತದೆ ಹಾಗೂ ನಾವು ಬೆಳಗಿಸಿದ ದೀಪಕ್ಕೂ ಒಂದು ಶ್ರೇಷ್ಠತೆ ಇರುತ್ತದೆ.

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
"ಅಸತೋಮ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
..."

|| ಶುಭಮಸ್ತು ||


ಸಂಗ್ರಹ: ಬಲ್ಲ ಮೂಲಗಳಿಂದ
ಫೋಟೋ: ಗೂಗಲ್

No comments: